ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ತುಂಬಾ ‘ಕ್ಯಾಮೆರಾ ಕಣ್ಣು’

Last Updated 14 ಸೆಪ್ಟೆಂಬರ್ 2015, 9:39 IST
ಅಕ್ಷರ ಗಾತ್ರ

ತುಮಕೂರು: ಸುಗಮ ಸಂಚಾರ ವ್ಯವಸ್ಥೆ ಹಾಗೂ ರಸ್ತೆ ಅಪಘಾತ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಗೆ ನಗರದ ಆಯಕಟ್ಟಿನ 11  ಜಾಗಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

ಒಟ್ಟು 15 ಕ್ಯಾಮೆರಾಗಳು ಸಂಚಾರ ವ್ಯವಸ್ಥೆಯ ಮೇಲೆ ದಿನದ 24 ತಾಸು ಹದ್ದಿನ ಕಣ್ಣಿಟ್ಟಿವೆ. ರೊಟೇಟಿಂಗ್‌ ಪಿಟಿ ಝೆಡ್‌ (ಸುತ್ತುವ) ಕ್ಯಾಮೆರಾ ಬಳಕೆಯಿಂದ ರಸ್ತೆಯಲ್ಲದೇ ಆಸುಪಾಸಿನ ಸ್ಥಳದಲ್ಲಿ ನಡೆಯುವ ಕೃತ್ಯಗಳು ದಾಖಲಾಗುತ್ತಿವೆ. ಪರಿಣಾಮಕಾರಿ ಸಂಚಾರಿ ನಿಯಮ ಅನುಷ್ಠಾನ ಹಾಗೂ ಕಳ್ಳತನ ತಡೆಯಲು ಶೀಘ್ರವೇ ಸ್ಟಿಲ್‌ ಕ್ಯಾಮೆರಾಗಳನ್ನು ಹಾಕಲು ಪೊಲೀಸ್‌ ಇಲಾಖೆ ಚಿಂತನೆ ನಡೆಸಿದೆ.

ಕ್ಯಾಮೆರಾ ವಿಶೇಷತೆ: ಸ್ಟಿಲ್‌ ಕ್ಯಾಮೆರಾಗಳು ನಿರ್ದಿಷ್ಟ ಸ್ಥಳಗಳನ್ನು ಕೇಂದ್ರೀಕರಿಸಿ ಕೆಲಸ ನಿರ್ವಹಿಸಿದರೆ, 360 ಡಿಗ್ರಿ ಕೋನದಲ್ಲಿ ತಿರುಗುವ ಪಿಟಿಝೆಡ್‌ ಕ್ಯಾಮೆರಾಗಳು ವೃತ್ತದ ಸುತ್ತಲಿನ ಪ್ರದೇಶದಲ್ಲಿ ನಡೆಯುವ ಘಟನೆಗಳನ್ನು ದಾಖಲಿಸಿಕೊಳ್ಳುತ್ತದೆ. 200 ಮೆಗಾ ಪಿಕ್ಸಲ್‌ ಹೊಂದಿರುವ ಈ ಕ್ಯಾಮೆರಾಗಳು ಸುಮಾರು ಅರ್ಧ ಕಿಲೋ ಮೀಟರ್‌ ವ್ಯಾಪ್ತಿವರೆಗೆ ದೃಶ್ಯಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿವೆ. ಅಲ್ಲದೇ 40 ದಿನಗಳವರೆಗೆ ಚಿತ್ರಿಸಿದ ವಿಡಿಯೋ ಚಿತ್ರಗಳನ್ನು ಸಂಗ್ರಹಿಸಿಟ್ಟುಕೊಳ್ಳಲಿವೆ. 

ಕೈಕೊಡುವ ಪಿಟಿಝೆಡ್‌ ಕ್ಯಾಮೆರಾ: ಕೆಲವೊಮ್ಮೆ ಅಪರಾಧ ಪ್ರಕರಣ ಕಂಡು ಹಿಡಿಯುವಲ್ಲಿ ಪಿಟಿಝೆಡ್‌ ಕ್ಯಾಮೆರಾದಿಂದ ಸಾಧ್ಯವಾಗುತ್ತಿಲ್ಲ.  ಆದ್ದರಿಂದ ಈಗಿರುವ ಕ್ಯಾಮೆರಾಗಳ ಜತೆಗೆ ನಾಲ್ಕು ದಿಕ್ಕಿನಲ್ಲೂ ದೃಶ್ಯ ಸೆರೆ ಹಿಡಿಯುವ ಸ್ಟಿಲ್‌ ಕ್ಯಾಮೆರಾ ಅಳವಡಿಸಲಾಗುವುದು. ಇದಕ್ಕಾಗಿ ಮಹಾನಗರ ಪಾಲಿಕೆ ₹ 1.5 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ ಮಾಹಿತಿ ನೀಡಿದರು. ಯಾವ ವೃತ್ತದಲ್ಲಿ ಪಿಟಿಝೆಡ್‌ ಕ್ಯಾಮೆರಾ ಅವಶ್ಯಕತೆ ಇದೆ ಎಂಬುದನ್ನು ಪರಿಶೀಲಿಸಿ ಅಳವಡಿಸಲಾಗುವುದು ಎಂದರು.

ವಿದ್ಯುತ್‌ ಸಮಸ್ಯೆ: ವಿದ್ಯುತ್‌ ಇಲ್ಲದಾಗ ಕ್ಯಾಮೆರಾಗಳು ಯುಪಿಎಸ್‌ ಆಧರಿತವಾಗಿ ಕಾರ್ಯನಿರ್ವಹಿಸುತ್ತಿವೆ. ಈ ನಡುವೆ ವಿದ್ಯುತ್‌ ಸಮಸ್ಯೆ ಹೆಚ್ಚಿದ್ದು, ಯುಪಿಎಸ್‌ ಬ್ಯಾಟರಿ ಬ್ಯಾಕಪ್‌ 6 ತಾಸು ಮಾತ್ರ ಇರುವುದರಿಂದ ಸಮಸ್ಯೆ ಕಾಣಿಸುತ್ತಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಕಂಟ್ರೋಲ್‌ ರೂಂನಿಂದ ನಿಯಂತ್ರಣ ಮಾಡಲಾಗುತ್ತದೆ (360 ಡಿಗ್ರಿ ತಿರುಗಿಸಿ ಸುತ್ತಲು ನಡಿಯುವಂತಹ ಸನ್ನಿವೇಶಗಳನ್ನು ನೋಡಬಹುದು). ಹೀಗಾಗಿ ಅಪರಾಧ ಪ್ರಕರಣಗಳ ಬಗ್ಗೆ ಸಾಕಷ್ಟು ಸುಳಿವು ದೊರೆಯುತ್ತದೆ.

ರಾತ್ರಿ ವೇಳೆ ಅನುಮಾನಾಸ್ಪದವಾಗಿ ಓಡಾಡುವ ವಾಹನಗಳು, ವ್ಯಕ್ತಿಗಳ ಮೇಲೆ ನಿಗಾ ಇರಿಸಲು ಅನುಕೂಲವಾಗಿದೆ.  ಕ್ಯಾಮೆರಾ ಸಹಾಯದಿಂದ ಎರಡು ವರ್ಷದಿಂದ ಪ್ರತಿ ವರ್ಷ 6ರಿಂದ8 ಪ್ರಕರಣ ಪತ್ತೆ ಹಚ್ಚಲು ಸಾಧ್ಯವಾಗಿದೆ. ನಗರದಲ್ಲಿ  ಪ್ರತಿಭಟನೆ ವೇಳೆ ಅಹಿತಕರ ಘಟನೆಗಳು  ನಡೆಯದಂತೆ ಜಾಗ್ರತೆ ವಹಿಸಲು ಸರ್ವೆಲೆನ್ಸ್‌ ವಾಹನ ನಿಯೋಜಿಸಲಾಗಿದೆ.  ಆದರೂ ಅಪರಾಧ ಪ್ರಕರಣ ಇಳಿಮುಖವಾಗುತ್ತಿಲ್ಲ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ಎಷ್ಟು ಕ್ಯಾಮೆರಾ
ಕ್ಯಾತ್ಸಂದ್ರ ವೃತ್ತ, ಕುಣಿಗಲ್‌ ಜಂಕ್ಷನ್‌  ಟೌನ್‌ ಹಾಲ್‌ ಸರ್ಕಲ್‌ನಲ್ಲಿ ಎರಡು ಹಾಗೂ  ಬಟವಾಡಿ ಜಂಕ್ಷನ್‌, ಡಾ. ಎಸ್‌.ಎಸ್‌.ಸರ್ಕಲ್‌, ಕೋಡಿ ವೃತ್ತ, ಶಿರಾ ಗೇಟ್‌,  ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಚರ್ಚ್‌ ವೃತ್ತ , ಮಂಡಿಪೇಟೆ, ಗುಬ್ಬಿಗೇಟ್‌ ಹಾಗೂ  ರೈಲ್ವೆ ಸ್ಟೇಷನ್‌ ನಲ್ಲಿ ಒಂದು  ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

*
ಕಳ್ಳತನ, ಕಾನೂನು ಬಾಹಿರ ಕೃತ್ಯ ಎಸಗುವ ಅಪರಾಧಿಗಳನ್ನು ಹಿಡಿಯಲು ಹಾಗೂ ಅಪರಾಧಕ್ಕೆ ಕಡಿವಾಣ ಹಾಕಲು ಸಿ.ಸಿ ಟಿವಿ ಕ್ಯಾಮೆರಾ ಅಳವಡಿಕೆಯಿಂದ ಅನುಕೂಲವಾಗಲಿದೆ.
-ಕಾರ್ತಿಕ್‌ ರೆಡ್ಡಿ,

ಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT